ನವಗ್ರಹಗಳಲ್ಲಿ ಒಬ್ಬ. ಗ್ರಹಮಂಡಲಗಳಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಮಂಡಲದ ಅಧಿಪತಿ. ಈ ಆಧಿಪತ್ಯ ಮನ್ವಂತರ ಬದಲಾದಂತೆಲ್ಲ ಬದಲಾಯಿಸುತ್ತದೆ. ಸ್ವಾಯಂಭುವ ಮನ್ವಂತರದಲ್ಲಿ ಅತ್ರಿ ಋಷಿಯ ಮಗ ಚಂದ್ರನಾಗಿದ್ದನೆಂದು ಶ್ರೀಮದ್ಭಾಗವತದಲ್ಲಿದೆ. ಬ್ರಹ್ಮನಿಂದ ಸೃಷ್ಟಿಕಾರ್ಯದಲ್ಲಿ ನಿಯುಕ್ತನಾದ ಅತ್ರಿ ತಪಸ್ಸು ಮಾಡುತ್ತಿದ್ದಾಗ ಆತನ ಕಣ್ಣುಗಳಿಂದ ನೀರು ಸುರಿಯಲು ಅದರಿಂದ ಹತ್ತು ದಿಕ್ಕುಗಳನ್ನು ಬೆಳಗುವ ದಿವ್ಯ ಕಾಂತಿ ಉದ್ಭವಿಸಿ ಲೋಕವನ್ನೆಲ್ಲ ಆವರಿಸುತ್ತದೆ. ಆ ತೇಜಸ್ಸಿಗೆ ಮರುಳಾದ ದಶದಿಕ್ಕುಗಳು ಹೆಣ್ಣಿನ ರೂಪದಿಂದ ಆ ಬೆಳಗುತ್ತಿರುವ ದಿವ್ಯಕಾಂತಿಯನ್ನು ಬಹಳ ಕಾಲ ಗರ್ಭದಲ್ಲಿ ಧರಿಸಿದ್ದು ಕೊನೆಗೆ ಅದನ್ನು ತಾಳಲಾರದೆ ಹೊರಗೆಡಹುತ್ತವೆ. ಆಗ ಬ್ರಹ್ಮ ಆ ಗರ್ಭಪಿಂಡಗಳನ್ನೆಲ್ಲ ಒಟ್ಟುಗೂಡಿಸಿ ಸರ್ವಾಯುಧಗಳಿಂದ ಕೂಡಿದ ಒಬ್ಬ ತರುಣನನ್ನು ನಿರ್ಮಿಸಿ ಆತನನ್ನು ಸಾವಿರ ಕುದುರೆಗಳನ್ನು ಹೂಡಿದ ವೇದಶಕ್ತಿಸ್ವರೂಪವಾದ ಒಂದು ರಥದಲ್ಲಿ ಕುಳ್ಳಿರಿಸಿಕೊಂಡು ತನ್ನ ನಿವಾಸಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ದೇವತೆಗಳೂ, ಋಷಿಗಳೂ, ಓಷಧಿಗಳೂ ಈ ಪುರುಷನನ್ನು ಸೋಮದೇವತಾಕ ಮಂತ್ರಗಳಿಂದ ಹೊಗಳುತ್ತಾರೆ. ಪಾರ್ವತೀಸಹಿತನಾದ ಶಿವನೂ ಈ ಯುವಕನನ್ನು ತನ್ನ ಎಂಟನೆಯ ಒಂದು ಅಂಶದಿಂದ ನೋಡಿ ಅನುಗ್ರಹಿಸುತ್ತಾನೆ. ಈ ಕಾರಣದಿಂದ ಈತನಿಗೆ ಸೋಮನೆಂಬ ಹೆಸರು ಬಂದಿದೆ. ದೇವತೆಗಳು ಸ್ತುತಿಸಿದಂತೆಲ್ಲ ಈತನ ತೇಜಸ್ಸು ಹೆಚ್ಚಿ ಅದರಿಂದ ಓಷಧಿಗಳೆಲ್ಲ ರಸಯುಕ್ತವಾಗುತ್ತವೆ. ಇದರಿಂದ ಓಷಧೀಶ, ದ್ವಿಜರಾಜ ಎಂಬ ಹೆಸರುಗಳೂ ಬಂದಿವೆ. ಬ್ರಹ್ಮ ಈ ತರುಣನನ್ನು ಚಂದ್ರಗ್ರಹಮಂಡಲಕ್ಕೆ ಅಧಿಪತಿಯನ್ನಾಗಿ ಮಾಡುತ್ತಾನೆ. ಸೃಷ್ಟ್ಯಾದಿಯಿಂದ ಪ್ರಳಯಕಾಲದವರೆಗೂ ಶಾಶ್ವತವಾಗಿರುವ ಈ ಗ್ರಹಮಂಡಲ ರೂಪ ದೇವಗೃಹಗಳು ಪುಣ್ಯವಂತರ ಪುಣ್ಯಫಲ ಭೋಗಕ್ಕಾಗಿ ಸೃಷ್ಟಿಯಾಗಿವೆ. ಈಗ ನಡೆಯುತ್ತಿರುವ ವೈವಸ್ವತಮನ್ವಂತರದಲ್ಲಿ ಧರ್ಮಪ್ರಜಾಪತಿಯಿಂದ ವಸುಮ್ನಿ ಎಂಬುವಳಲ್ಲಿ ಹುಟ್ಟಿದ ತ್ವಿಷಿ ಅಥವಾ ವಸು ಎಂಬಾತ ಚಂದ್ರನ ಸ್ಥಾನದಲ್ಲಿದ್ದಾನೆ. ಚಂದ್ರನಿಗೆ ಇಂದು ಓಷಧೀಶ, ಅಬ್ಜ, ಕುಮುದಬಂಧು, ಕಲಾನಿಧಿ, ಗ್ಲೌಃ, ರೋಹಿಣೀಕಾಂತ, ಕ್ಷಪಾಕರ, ನಿಶಾಕರ, ತಾರೇಶ, ನಕ್ಷತ್ರೇಶ, ಜೈವಾತೃಕ, ಹಿಮಕರ, ಅಮೃತಕಿರಣ, ವಿಧು 	ಹೆಸರುಗಳೂ ಪ್ರಚಲಿತವಾಗಿವೆ. ತನ್ನನ್ನು ನೋಡುವವರಿಗೆ ಆಹ್ಲಾದವನ್ನುಂಟು ಮಾಡುವುದರಿಂದಲೂ ತಾನು ಪ್ರಕಾಶಿಸುತ್ತಿರುವುದರಿಂದಲೂ ಈ ಗ್ರಹಕ್ಕೆ ಚಂದ್ರ ಎಂಬ ಹೆಸರು ಅನ್ವರ್ಥವಾಗಿ ಬಂದಿದೆ. ಉಳಿದ ಹೆಸರುಗಳು ಆತನ ಹುಟ್ಟು ಮತ್ತು ಗುಣಗಳನ್ನು ಅನುಸರಿಸಿ ಬಂದಿವೆ. ಬ್ರಹ್ಮ ಸೃಷ್ಟಿಸಲು ಇಷ್ಟಪಟ್ಟೊಡನೆಯೆ ಮನಸ್ಸಿನಿಂದ ಚಂದ್ರನನ್ನು ಸೃಷ್ಟಿಸಿದನೆಂದು ಸೂರ್ಯಸಿದ್ಧಾಂತದಲ್ಲಿ ಹೇಳಿದೆ.

ಚಂದ್ರ ದಕ್ಷಪುತ್ರಿಯರಲ್ಲಿ ನಕ್ಷತ್ರಸ್ವರೂಪರಾದ ಆಶ್ವಿನಿ ಮೊದಲಾದ 27 ಕನ್ಯೆಯರನ್ನು ಮದುವೆಯಾಗುತ್ತಾನೆ. ಆದರೆ ಅವರಲ್ಲಿ ರೋಹಿಣಿ ಎಂಬುವಳಲ್ಲಿ ಮಾತ್ರ ವಿಶೇಷವಾಗಿ ಲೋಲನಾಗಿರುತ್ತಾನೆ. ಉಳಿದವರು ಈ ವಿಷಯವನ್ನು ತಮ್ಮ ತಂದೆಯಾದ ದಕ್ಷಬ್ರಹ್ಮನಲ್ಲಿ ಹೇಳಿಕೊಳ್ಳಲು ಆತ ಚಂದ್ರನಿಗೆ ಕ್ಷಯರೋಗ ಪೀಡಿತನಾಗುವಂತೆ ಶಾಪವನ್ನು ಕೊಡುತ್ತಾನೆ. ಇದನ್ನು ಕೇಳಿದ ಚಂದ್ರ ಭಯಪಟ್ಟು ಶಿವನಲ್ಲಿ ಮೊರೆಯಿಡುತ್ತಾನೆ. ಶಿವ ಪ್ರೀತನಾಗಿ ಆಗವನಿಗೆ ಅಭಯಪ್ರದಾನ ಮಾಡಲು ಚಂದ್ರ ಸುಖವಾಗಿರುತ್ತಾನೆ. ಈ ಸ್ಥಿತಿಯನ್ನರಿತ ದಕ್ಷ ಶಿವನಿಗೆ ಶಾಪಕೊಡಬೇಕೆಂದು ಬಗೆಯುತ್ತಾನೆ. ಅಷ್ಟರಲ್ಲಿ ಬ್ರಹ್ಮವಿಷ್ಣುಗಳು ಅಲ್ಲಿಗೆ ಬಂದು ಚಂದ್ರನನ್ನು ಎರಡು ಭಾಗಮಾಡಿ ಒಂದು ಭಾಗಕ್ಕೆ ವೃದ್ಧಿಕ್ಷಯಗಳಿಲ್ಲದಂತೆ ಮಾಡಿ ಆ ಭಾಗವನ್ನು ನಕ್ಷತ್ರಗಳಿಗೆ ಕೊಡುತ್ತಾರೆ. ದಕ್ಷಶಾಪದಿಂದ ಖಿನ್ನನಾದ ಚಂದ್ರ ದಕ್ಷನ ಸಂಪತ್ತು ನಾಶವಾಗುವಂತೆ ಶಾಪಕೊಟ್ಟು ಎಲ್ಲಿಯೋ ಅಡಗಿಕೊಳ್ಳುತ್ತಾನೆ. ಚಂದ್ರ ದರ್ಶನವಿಲ್ಲದೆ ಪೈರುಗಿಡ ಮರಬಳ್ಳಿಗಳೆಲ್ಲ ಸಾರಹೀನವಾಗುತ್ತವೆ. ದೇವತೆಗಳೆಲ್ಲ ಆಗ ಬ್ರಹ್ಮನಲ್ಲಿ ಮೊರೆಯಿಡುತ್ತಾರೆ. ಬ್ರಹ್ಮನ ಸೂಚನೆಯಂತೆ ಅವರೆಲ್ಲ ಒಟ್ಟುಗೂಡಿ ಓಷಧಿಗಳನ್ನೆಲ್ಲ ತಂದು ಕ್ಷೀರಸಮುದ್ರದಲ್ಲಿ ಹಾಕಿ ಕಡೆಯುತ್ತಾರೆ. ಅಲ್ಲಿಂದ ಚಂದ್ರ ಉದ್ಭವಿಸಿ ಬರುತ್ತಾನೆ. ಶಾಪಗ್ರಸ್ತನಾದ ಚಂದ್ರ ಪ್ರಭಾಸತೀರ್ಥದಲ್ಲಿ ಸ್ನಾನಮಾಡಿದ ಕೂಡಲೆ ಕ್ಷಯರೋಗ ನಿವಾರಣೆಯಾಗುತ್ತದೆ.

ಚಂದ್ರ ಬೃಹಸ್ಪತ್ಯಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗುರುಪತ್ನಿಯಾದ ತಾರೆಗೂ ಈತನಿಗೂ ಮೋಹ ಅಂಕುರಿಸುತ್ತದೆ. ಬೃಹಸ್ಪತಿ ಇಲ್ಲದ ವೇಳೆಯಲ್ಲಿ ಚಂದ್ರ ತಾರೆಯನ್ನು ಅಪಹರಿಸುತ್ತಾನೆ. ಇದನ್ನು ತಿಳಿದ ಬೃಹಸ್ಪತಿ ಬ್ರಹ್ಮನಲ್ಲಿ ಮೊರೆಯಿಡುತ್ತಾನೆ. ಬ್ರಹ್ಮನ ಆದೇಶದಂತೆ ಚಂದ್ರ ತಾರೆಯನ್ನು ಬೃಹಸ್ಪತಿಗೆ ಒಪ್ಪಿಸುತ್ತಾನೆ. ಆ ವೇಳೆಗೆ ತಾರೆ ಚಂದ್ರನಿಂದ ಗರ್ಭ ಧರಿಸಿದ್ದ ಕಾರಣ ಮಗುವಿನ ವಿಚಾರದಲ್ಲಿ ವಿವಾದ ಹುಟ್ಟುತ್ತದೆ. ಬ್ರಹ್ಮ ತಾರೆಯಿಂದ ವಸ್ತುಸ್ಥಿತಿಯನ್ನು ತಿಳಿದು ಮಗು ಚಂದ್ರನಿಗೇ ಸೇರತಕ್ಕದೆಂದು ನಿಷ್ಕರ್ಷಿಸುತ್ತಾನೆ. ಇದರಿಂದ ತಾರೆಯಲ್ಲಿ ಜನಿಸಿದ ಬುಧ ಚಂದ್ರನ ಮಗನಾಗುತ್ತಾನೆ ಎಂದು-ಪುರಾಣಗಳಲ್ಲಿದೆ.

ಒಮ್ಮೆ ಪ್ರಾಚೇತಸಮುನಿ ಕ್ರುದ್ಧನಾಗಿ ಗಿಡಮರ ಬಳ್ಳಿಗಳನ್ನು ಸುಡಲು ತೊಡಗುತ್ತಾನೆ. ಆಗ ಓಷಧಿಗಳೆಲ್ಲ ತಮ್ಮ ಒಡೆಯನಾದ ಚಂದ್ರನಲ್ಲಿ ಮೊರೆಯಿಡುತ್ತವೆ. ಚಂದ್ರ ವೃಕ್ಷಪುತ್ರಿಯಾದ ಮಾರಿಷೆ ಎಂಬ ಕನ್ಯೆಯನ್ನು ಪ್ರಾಚೇತಸನಿಗೆ ಕೊಡಿಸಿ ಅವನ ಕೋಪವನ್ನು ಶಾಂತಗೊಳಿಸಿ ವೃಕ್ಷಗಳ ದುಃಖವನ್ನು ಪರಿಹರಿಸುತ್ತಾನೆಂದು ವಿಷ್ಣಪುರಾಣದಲ್ಲಿದೆ.

ದೇವತೆಗಳೂ ದೈತ್ಯರೂ ಕೂಡಿ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಕಡೆದು ಅಮೃತವನ್ನು ಪಡೆದ ಬಳಿಕ ಅದರ ಪ್ರಾಶನಕ್ಕಾಗಿ ಎಲ್ಲರೂ ಕುಳಿತಿದ್ದ ವೇಳೆಯಲ್ಲಿ ರಾಹು ಎಂಬ ಅಸುರ ದೇವತೆಗಳ ಗುಂಪಿನಲ್ಲಿ ಸೇರಿ ತಾನೂ ಅಮೃತಪ್ರಾಶನ ಮಾಡುತ್ತಾನೆ. ಸೂರ್ಯ ಚಂದ್ರರು ಇದನ್ನು ವಿಷ್ಣುವಿಗೆ ತಿಳಿಸುತ್ತಾರೆ. ಕೂಡಲೇ ವಿಷ್ಣು ಆ ರಕ್ಕಸನ ಶಿರಸ್ಸನ್ನು ಕತ್ತರಿಸುತ್ತಾನೆ. ಆ ವೇಳೆಗೆ ರಕ್ಕಸ ಅಮೃತಪ್ರಾಶನ ಮಾಡಿದ್ದುದರಿಂದ ರಾಹುವಿನ ರುಂಡಮುಂಡಗಳೆರಡೂ ರಾಹು-ಕೇತುಗಳೆಂಬ ಹೆಸರಿನಿಂದ ಸಜೀವವಾಗುತ್ತವೆ. ಸೂರ್ಯಚಂದ್ರರು ತನ್ನ ಮೇಲೆ ದೂರು ಹೇಳಿದರೆಂಬ ದ್ವೇóಷದಿಂದ ರಾಹು ಆಗಾಗ್ಗೆ, ವರ್ಷಕಾಲಗಳಲ್ಲಿ ಅವರನ್ನು ಪೀಡಿಸುತ್ತಾನೆ-ಎಂಬ ಪೌರಾಣಿಕ ಕಥೆ ಇದೆ.

ಗಣಪತಿ ತನ್ನ ಪತ್ನಿಯರಾದ ಸಿದ್ಧಿಬುದ್ಧಿಗಳೊಡನೆ ಮೂಷಕವಾಹವನ್ನೇರಿ ಲೋಕಸಂಚಾರ ಮಾಡುತ್ತ ಚಂದ್ರಲೋಕಕ್ಕೆ ಬಂದು ಅಲ್ಲಿ ಸ್ವೇಚ್ಛೆಯಾಗಿ ತಿರುಗಾಡುತ್ತಾನೆ. ಆಗ ಸೌಂದರ್ಯಸಂಪನ್ನನಾಗಿದ್ದ ಚಂದ್ರ ಗಣಪತಿಯ ರೂಪವನ್ನು ನೋಡಿ ಅಪಹಾಸ್ಯ ಮಾಡಿ ನಗುತ್ತಾನೆ. ಅದನ್ನು ಕಂಡು ಗಣಪತಿಗೆ ಕೋಪ ಬಂದು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ದುರದುರನೆ ಚಂದ್ರನನ್ನು ನೋಡಿ-ಎಲೌ ಮದಾಂಧನೆ ನಿನ್ನ ಗರ್ವವನ್ನು ನಾನು ಬಲ್ಲೆ. ನನ್ನನ್ನು ಹಾಸ್ಯ ಮಾಡಿದುದಕ್ಕೆ ತಕ್ಕ ಫಲವನ್ನು ನೀನು ಅನುಭವಿಸುತ್ತೀಯೆ. ಇಂದಿನಿಂದ ನಿನ್ನ ಸೌಂದರ್ಯ ಕುಂದಿಹೋಗಲಿ. ನೀನು ಮೃಗಲಾಂಛನನಾಗಿ ಬಾಳು. ಭಾದ್ರಪದ ಮಾಸ ಶುಕ್ಷಪಕ್ಷದ ಚತುರ್ಥಿಯಂದು ಯಾರು ನಿನ್ನನ್ನು ನೋಡುವರೋ ಅವರಿಗೆ ಮಿಥ್ಯಾಪವಾದ ಉಂಟಾಗಲಿ. ಇದು ನನ್ನ ಶಾಪ-ಎಂದು ಹೇಳುತ್ತಾನೆ. ಚಂದ್ರ ತನಗೆ ಬಂದ ಶಾಪಕ್ಕೆ ಹೆದರಿ ಕಂಗೆಟ್ಟು ಕಮಲಮಧ್ಯದಲ್ಲಿ ಅಡಗಿಕೊಳ್ಳುತ್ತಾನೆ. ಮುಂದೆ ಅವನ ಪ್ರಕಾಶವೇ ಇಲ್ಲದಂತಾಗುತ್ತದೆ. ಅಮೃತಪಾನಜೀವಿಗಳಾದ ದೇವತೆಗಳಿಗೆ ಅಮೃತಕಿರಣನಾದ ಚಂದ್ರನಿಲ್ಲದ ಕಾರಣ ಆಹಾರವೇ ಇಲ್ಲದಂತಾಗುತದೆ. ಇದರಿಂದ ನೊಂದ ದೇವತೆಗಳು ಬ್ರಹ್ಮನಲ್ಲಿಗೆ ಬಂದು ಆತನನ್ನು ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಆಗ ಬ್ರಹ್ಮ ಈ ಗಣಪತಿಯ ಶಾಪವನ್ನು ಪರಿಹರಿಸುವಂತೆ ಕೇಳಿಕೊಳ್ಳಬೇಕೆಂದು ತಿಳಿಸಿ ಸಂಕಷ್ಟಹರ ಗಣಪತಿವ್ರತವನ್ನು ಉಪದೇಶ ಮಾಡುತ್ತಾನೆ. ಚಂದ್ರ ಈ ವ್ರತದಿಂದ ಗಣಪತಿಯನ್ನು ತುಷ್ಟಿಪಡಿಸುತ್ತಾನೆ. ಬಳಿಕ ಪ್ರಾರ್ಥನೆಯಿಂದ ವಿಶಾಪವನ್ನು ಕೊಡುತ್ತಾನೆ. ಅದರಂತೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ಮೊದಲು ದರ್ಶನ ಮಾಡಿದವರಿಗೆ ಈ ದೋಷ ಉಂಟಾಗುವುದಿಲ್ಲ ಎಂದು ಸ್ಯಮಂತಕೋಪಾಖ್ಯಾನದ ಕಥೆ ಹೇಳುತ್ತದೆ. 

ಚಂದ್ರ ಸ್ವಯಂಪ್ರಕಾಶವುಳ್ಳ ಗ್ರಹವಲ್ಲ, ಸಹಸ್ರಕಿರಣನಾದ ಸೂರ್ಯನ ಕಿರಣಗಳಲ್ಲಿ ಸುಷುಮ್ನಾ ಎಂಬ ಕಿರಣ ಪ್ರತಿಬಿಂಬಿತವಾಗುತ್ತದಾಗಿ ಆತ ಪ್ರಕಾಶಿಸುತ್ತಾನೆ. ಚಂದ್ರನ ದೇಹ ಶುಕ್ಲವರ್ಣದಿಂದ ಕೂಡಿ ಜಲಮಯವಾಗಿದೆ.

ಸೂರ್ಯನಿಗೆ ಕೆಳಗಿರುವ ಚಂದ್ರನ ಸೂರ್ಯಾಭಿಮುಖವಾದ ಅರ್ಧಭಾಗ ಸೂರ್ಯನ ಕಾಂತಿಯಿಂದ ಪ್ರಕಾಶಿಸುತ್ತದೆ. ಬಿಸಿಲಿನಲ್ಲಿಟ್ಟ ಮಡಕೆಯಂತೆ ಉಳಿದ ಅರ್ಧಭಾಗ ಕಪ್ಪಗಿರುತ್ತದೆ; ಜಲಮಯವಾದ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬಿದ್ದು ಕನ್ನಡಿಯಲ್ಲಿನಂತೆ ಪ್ರತಿಬಿಂಬಿತವಾಗಿ ಅಲ್ಲಿರುವ ಕತ್ತಲೆ ಹೋಗುತ್ತದೆ ಎಂದು ವರಾಹಮಿಹಿರನ ಬೃಹತ್ ಸಂಹಿತೆಯಲ್ಲಿದೆ.

ಅಷ್ಟಮೂರ್ತಿ ಸ್ವರೂಪಗಳಲ್ಲಿ ಚಂದ್ರ ಮಹಾದೇವಸ್ವರೂಪಿ ಆಗಿದ್ದಾನೆ. ಶ್ರೀಕೃಷ್ಣಜಯಂತಿ ದಿವಸ ರೋಹಿಣಿಸಹಿತನಾದ ಚಂದ್ರನಿಗೆ ಅಘರ್ಯ್ಪ್ರದಾನ ಮಾಡುವುದು ಇಂದಿಗೂ ರೂಢಿಯಲ್ಲಿದೆ.

ಚಂದ್ರ ಸುತ್ತುವ ಕಕ್ಷೆಯ ಪ್ರಮಾಣ 3,24,000 ಯೋಜನಗಳು. ಒಂದು ಕಲ್ಪದಲ್ಲಿ ಚಂದ್ರ 5,77,33,00,000 ಬಾರಿ ಆವರ್ತಿಸುತ್ತಾನೆ. ಚಂದ್ರನನ್ನು ಮಂದೋಚ್ಚ ಮತ್ತು ಪಾತವೆಂಬ ಎರಡು ಶಕ್ತಿಗಳು ತಮ್ಮ ತಮ್ಮ ಕಡೆಗೆ ಸೆಳೆಯುತ್ತವೆ. ಈ ಸೆಳೆತದಿಂದ ಚಂದ್ರನಿಗೆ ಗತಿ ಉಂಟಾಗುತ್ತದೆ. ಒಂದು ಕಲ್ಪದಲ್ಲಿ ಚಂದ್ರನ ಮಂದೋಚ್ಚ 48,81,05,858 ಭಗಣಗಳು. ಚಂದ್ರನ ಪಾತ 23,23,11,168 ಭಗಣಗಳು. ಚಂದ್ರನ ದೈನಂದಿನ ಗತಿ 13 ಅಂಶ 34 ಕಲೆ 52 ವಿಕಲೆ 4 ಪ್ರವಿಕಲೆ ಎಂದು ಸೂರ್ಯಸಿದ್ಧಾಂತದಲ್ಲಿ ಉಕ್ತವಾಗಿದೆ.
ಭಾಸ್ಕರಾಚಾರ್ಯ ತಿಳಿಸಿರುವಂತೆ ಚಂದ್ರನ ಮೇಲ್ಭಾಗದಲ್ಲಿ ಪಿತೃದೇವತೆಗಳು ವಾಸಿಸುತ್ತಾರೆ.

	ಕನ್ನಡ ಜಾತಕತಿಲಕದ ಕರ್ತೃವಾದ ಶ್ರೀಧರಾಚಾರ್ಯ (1049)
	ಮೃದುವಾಕ್ಯನಸೃಕ್ಸಾರಂ
	ಸುದೃಷ್ಟಿ ಮೇಧಾವಿ ನಿಡಿಯನನಿಲಕಫಾತ್ಮಂ
	ಸದಯಂ ಚೊಚ್ಚನೆ ಮೈ ಬ
	ಟ್ಟಿದನತಿಚಪಳಂ ಸುಖಪ್ರಿಯಾಸಸಿಯೆನಿಕುಂ

(ಮೃದುಭಾಷಿ, ರಕ್ತಪುಷ್ಟ, ನೋಡಲು ಸುಂದರ, ಮೇಧಾವಿ, ಸ್ನೇಹಪರ, ದಯಾವಂತ, ಎತ್ತರವಾದ ಕಫವಾತಗಳಿಂದ ಕೂಡಿದ ಗುಂಡುಶರೀರ, ಬಿಳುಪು ಬಣ್ಣ, ಚಪಲಸ್ವಭಾವದವ) ಎಂದು ಚಂದ್ರಸ್ವರೂಪವನ್ನು ವರ್ಣಿಸಿದ್ದಾನೆ.

ವಿಷ್ಣುವಿನ ಕಣ್ಣೂ ಶಂಕರನ ಶಿರೋಭೂಷಣವೂ ಅತ್ರಿಪುತ್ರನೂ ಶ್ವೇತವಸ್ತ್ರಧಾರಿಯೂ ಗದಾಪಾಣಿಯೂ ಸರ್ವಾಭರಣಭೂಷಿತನೂ ಶ್ವೇತಛತ್ರದಿಂದ ಕೂಡಿದವನೂ ಹತ್ತು ಬಿಳಿಕುದುರೆಗಳುಳ್ಳ ರಥದಲ್ಲಿ ಚತುರಸ್ರಾಕಾರದ ಪೀಠದ ಮೇಲೆ ಪಶ್ಚಿಮಾಭಿಮುಖನಾಗಿ, ಅಭಯ ಮತ್ತು ವರದ ಮುದ್ರೆಗಳಿಂದ ಕೂಡಿ ವಿರಾಜಿಸುತ್ತಿರುವ ಚಂದ್ರನನ್ನು ಧ್ಯಾನಿಸಿದರೆ ಕ್ಷಯ, ಅಪಸ್ಮಾರ, ಕುಷ್ಠ, ತಾಪಜ್ವರ ಮೊದಲಾದ ಉಪದ್ರವಗಳು ನಿವಾರಿತವಾಗಿ ಸರ್ವ ಸಂಪತ್ಸಮೃದ್ಧಿಯುಂಟಾಗುತ್ತದೆಯೆಂದು ಬ್ರಹ್ಮಾಂಡಪುರಾಣದಲ್ಲಿ ಹೇಳಿದೆ. ಚಂದ್ರಗ್ರಹವನ್ನು  ಉದ್ದೇಶಿಸಿ ಮಾಡುವ ಹೋಮದಲ್ಲಿ ಪಲಾಶಸಮಿತ್ತನ್ನು ಉಪಯೋಗಿಸಬೇಕು. ನವಗ್ರಹಪುಜೆ ಮಾಡುವಾಗ ಚಂದ್ರನನ್ನು ಆಗ್ನೇಯಭಾಗದಲ್ಲಿಟ್ಟು ಪುಜಿಸಬೇಕು.

ಕಾಮಶಾಸ್ತ್ರದಲ್ಲಿ
	ಪುಷಾಯಶಾಸುಮನಸಾ ರತಿಪ್ರಾಪ್ತಿಸ್ತಥಾ ಧೃತಿಃ
	ಋದ್ಧಿಸ್ಸೌಮ್ಯಾಮರೀಚಿಶ್ಚ ತಥಾಚೈವಾಂಶುಮಾಲಿನೀ
	ಅಂಗಿರಾ ಶಶಿನೀಚೇತಿ ಛಾಯಾ ಸಂಪುರ್ಣಮಂಡಲಾ 
	ತುಷ್ಟಿಶ್ಚ್ಯೆವಾಮೃತಾ ಚೇತಿ ಕಲಾಸ್ಸೋಮಸ್ಯ ಷೋಡಶ ಎಂದೂ

ಮಂತ್ರಶಾಸ್ತ್ರದಲ್ಲಿ
	ಅಮೃತಾ ಮಾನದಾ ಪುಷಾ ಪುಷ್ಟಿಸ್ತುಷ್ಟೀ ರತಿರ್ಧೃತಿಃ
	ಶಶಿನೀ ಚಂದ್ರಿಕಾ ಕಾಂತಿಜೋರ್ಯ್ತ್ಸ್ನಾ ಶ್ರೀಃ ಪ್ರೀತಿರಂಗದಾ
	ಪುರ್ಣಾಪುರ್ಣಾಮೃತಾಕಾಮದಾಯಿನ್ಯಃ ಶಶಿನಃ ಕಲಾಃ
ಎಂದೂ ಚಂದ್ರನ ಹದಿನಾರು ಕಲೆಗಳು ಉಕ್ತವಾಗಿವೆ.

ತಿಥಿಭೇದದಿಂದ ಸ್ತ್ರೀಯರ ಅಂಗವಿಶೇಷಗಳಲ್ಲಿ ಇರುವ ಕಾಮನನ್ನು ಪ್ರತ್ಯೇಕವಾಗಿ ಓಂಕಾರಸಹಿತ ಈ ಕಲಾನಾಮರೂಪ ಮಂತ್ರಗಳಿಂದ ಚಲಿಸುವಂತೆ ಮಾಡಬಹುದು. ಚಂದ್ರಗ್ರಹಕ್ಕೆ ಅಧಿದೇವತೆ ಅಪ್ಪು (ನೀರು), ಪ್ರತ್ಯಧಿದೇವತೆ ಉಮಾ(ಗೌರಿ). 

ಶುಕ್ಲಪಕ್ಷದ ಪ್ರಾರಂಭದಲ್ಲಿ ಏಕಕಲಾಮಾತ್ರದಿಂದ ಕೂಡಿದ ಚಂದ್ರ ಒಂದೊಂದು ತಿಥಿಗೆ ಒಂದೊಂದು ಕಲೆಯಂತೆ ಕೂಡಿಕೊಂಡು ಪುರ್ಣಿಮಾ ತಿಥಿಯಲ್ಲಿ ಷೋಡಶಕಲಾಪರಿಪುರ್ಣನಾಗುತ್ತಾನೆ. ಸೂರ್ಯನ ತೇಜಸ್ಸಿನಿಂದ ಈತ ವೃದ್ಧಿಹೊಂದುತ್ತಾನೆ. ಕೃಷ್ಣಪಕ್ಷದಲ್ಲಿ ಪ್ರಥಮ ಮೊದಲಾದ ತಿಥಿಕ್ರಮದಲ್ಲಿ ಅಗ್ನಿ, ವಾಯು, ವಿಶ್ವೇದೇವರು, ಪ್ರಜಾಪತಿ, ವರುಣ, ವಾಸವ, ದಿವ್ಯಋಷಿಗಳು, ಅಷ್ಟವಸುಗಳು, ಇಂದ್ರ, ಮರುದ್ದೇವತೆಗಳು, ರುದ್ರ, ವಿಷ್ಣು, ಕುಬೇರ, ಪಶುಪತಿ, ಪಿತೃಗಳು-ಇವರು ಅಮೃತರೂಪದ ಚಂದ್ರನ ಕಲೆಗಳನ್ನು ಪಾನಮಾಡುವುದರಿಂದ ಚಂದ್ರ ಕ್ಷಯಿಸಿ ಅಮಾವಾಸ್ಯೆಯಲ್ಲಿ ಏಕಕಲಾವಶಿಷ್ಟನಾಗುತ್ತಾನೆ.

ಶುಕ್ಲಪಕ್ಷ ಪಾಡ್ಯದಿಂದ ಚಂದ್ರಬಿಂಬದ ಕೆಳಪಾಶರ್ವ್ದಿಂದ ಶೌಕ್ಲ್ಯ ವೃದ್ಧಿಯಾಗುತ್ತದೆ. ಇದು ಶೃಂಗದಂತೆ ಕಾಣುತ್ತದೆ. ಕೆಲವು ವೇಳೆ ಉತ್ತರಕ್ಕೆ ಶೃಂಗ ಎದ್ದು ಕಾಣುತ್ತದೆ. ಭಾರತದಲ್ಲಿ ಸಾಧಾರಣವಾಗಿ ಇದು ಮಿಥುನ ಮಾಸದಿಂದ ಮಕರ ಮಾಸದವರೆಗೆ ಆಗುತ್ತದೆ. ವೃಷಭ ಮತ್ತು ಕುಂಭಮಾಸಗಳಲ್ಲಿ ಚಂದ್ರನ ಎರಡು ಶೃಂಗಗಳೂ ಸಮವಾಗಿರುತ್ತವೆ. ಉಳಿದ ತಿಂಗಳುಗಳಲ್ಲಿ ಶೃಂಗ ದಕ್ಷಿಣಕ್ಕೆ ಎದ್ದು ಕಾಣುತ್ತದೆ.

ಈ ಶೃಂಗೋನ್ನತಿಯನ್ನು ನೋಡಿ ದೇಶಕ್ಕೆ ಆಗುವ ಹತ್ತು ಬಗೆಯ ಫಲಗಳನ್ನು ವರಾಹಮಿಹಿರಾಚಾರ್ಯ ತಿಳಿಸಿರುತ್ತಾರೆ. 

ಶೃಂಗ ಎದ್ದಿರುವುದು ಹಡಗಿನಂತೆ ಕಂಡರೆ ನೌಸಂಸ್ಥಾ. ಇದರಿಂದ ನಾವಿಕರಿಗೆ ಪೀಡೆ, ಲೋಕಕಲ್ಯಾಣ. ನೇಗಿಲಿನಂತೆ ಅರ್ಧ ಮೇಲಕ್ಕೆದ್ದಿದ್ದರೆ ಲಾಂಗಲ. ರೈತರಿಗೆ ತೊಂದರೆ. ದಕ್ಷಿಣ ಶೃಂಗ ಆರ್ಧಮಾತ್ರ ಮೇಲಕ್ಕೆ ಕಂಡರೆ ದುಷ್ಟ ಲಾಂಗಲ. ಅಶುಭ. ಎರಡು ಶೃಂಗಗಳೂ ಸಮನಾಗಿದ್ದರೆ ಸಮಶೃಂಗ. ಸುಭಿಕ್ಷ. ಶೃಂಗ ಎದ್ದುಕಾಣದೆ ಕೋಲಿನಂತೆ ಒಂದೇ ಸಮನಾಗಿ ಕಂಡರೆ ದಂಡ. ಹಸುಗಳಿಗೆ ಪೀಡೆ, ಬಿಲ್ಲಿನ ಆಕಾರದಲ್ಲಿ ಕಂಡರೆ ಕಾರ್ಮುಕ. ಯುದ್ಧ ಭಯ. ದಕ್ಷಿಣೋತ್ತರ ವಿಸ್ತಾರವಾಗಿ ಕಂಡರೆ ಯುಗ. ಭೂಕಂಪ. ಯುಗ ಸಂಸ್ಥೆಯಲ್ಲಿ ದಕ್ಷಿಣಭಾಗ ಸ್ವಲ್ಪ ಎದ್ದು ಕಂಡರೆ ಪಾಶರ್ವ್ಶಾಯಿ, ದೇಶಾಂತರ ವ್ಯಾಪಾರಸ್ಥರಿಗೆ ನಷ್ಟ. ದಕ್ಷಿಣ ಶೃಂಗ ಹೆಚ್ಚಾಗಿ ಬಗ್ಗಿದ್ದರೆ ಅವರ್ಜಿತ. ಸುಭಿಕ್ಷವಿಲ್ಲ. ಖಂಡರೇಖೆಯಂತೆ ಕಂಡರೆ ಕುಂಡಲ್ಲಿ, ರಾಜನಿಗೆ ಪದಚ್ಯುತಿ. ಉತ್ತರ ಶೃಂಗವಾದರೆ ಶ್ರೇಯಸ್ಕರ. ಚಂದ್ರನಲ್ಲಿ ಒಂದೇ ಶೃಂಗವನ್ನು ಕಂಡರೆ ಇಲ್ಲವೆ ಶುಕ್ಲಪಕ್ಷದಲ್ಲಿ ಕೆಳಮುಖವಾದ ಶೃಂಗವನ್ನು ಕಂಡರೆ ನೋಡಿದವನಿಗೆ ಸಾವು ನಿಶ್ಚಯ. ಚಂದ್ರನ ಆಕಾರ ಚಿಕ್ಕದಾಗಿ ಕಂಡರೆ ದೇಶಕ್ಕೆ ದುರ್ಭಿಕ್ಷಭಯ. ದೊಡ್ಡದಾಗಿ ಕಂಡರೆ ಸುಭಿಕ್ಷ. ಮಧ್ಯಾಕಾರದಲ್ಲಿ ಕಂಡರೆ ಕ್ಷುದ್ಭಯ.

ಚಂದ್ರನ ಶೃಂಗ ಕುಜನಿಂದ ಆಹತವಾದಂತೆ ಕಂಡರೆ ಮ್ಲೇಚ್ಛದೇಶಕ್ಕೆ ತೊಂದರೆ. ಬುಧನಿಂದ ಆಹತವಾದರೆ ಶಸ್ತ್ರಕ್ಷುದ್ಭಯ. ಗುರುವಿನಿಂದ ಆಹತವಾದರೆ ಶೃಷ್ಠ ಪ್ರಮುಖ ವ್ಯಕ್ತಿಯ ಮರಣ. ಶುಕ್ರನಿಂದ ಆಹತವಾದರೆ ಅಲ್ಪರಾಜರ ಮರಣ. 
ಚಂದ್ರ ಬೆಳ್ಳಗೆ ಮಲ್ಲೆಹೂವಿನಂತೆ ಕಾಂತಿಯಿಂದ ಕೂಡಿರುವಂತೆ ಕಂಡರೆ ಜಗತ್ತಿಗೆ ಮಂಗಳ.

ಭೂಮಿಯ ಛಾಯೆ ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಭೂಛಾಯೆಯನ್ನು ಪುರ್ವಾಭಿಮುಖವಾಗಿ ಚಂದ್ರ ಪ್ರವೇಶಿಸುವುದರಿಂದ ಚಂದ್ರಬಿಂಬದ ಪಶ್ಚಿಮ ಭಾಗದಲ್ಲಿ ಗ್ರಹಣ ಸ್ಪರ್ಶವಾಗುವಂತೆ ನಮಗೆ ಕಾಣುತ್ತದೆ. ಈ ಗ್ರಹಣಕಾಲದಲ್ಲಿ ರಾಹು-ಕೇತುಗಳ ಸಾನ್ನಿಧ್ಯವಿರುತ್ತದೆಂಬ ಪ್ರಾಚೀನರ ಅಭಿಪ್ರಾಯದಂತೆ ರಾಹುಗ್ರಸ್ತ ಕೇತುಗ್ರಸ್ತ ಎಂದು ಇಂದಿಗೂ ಹೇಳುತ್ತಾರೆ. ಗ್ರಹಣಕಾಲದಲ್ಲಿ ಮಾಡುವ ತರ್ಪಣ ಹೋಮಾದಿಗಳ ಫಲ ಆ ರಾಹುಕೇತುಗಳಿಗೆ ತಲುಪುತ್ತವೆ. ಗ್ರಹಣ ಹಿಡಿದಿರುವಾಗ ಚಂದ್ರ ಅಸ್ತನಾದರೆ, ಗ್ರಹಣ ಹಿಡಿದಿರುವಾಗಲೇ ಉದಯಿಸಿದರೆ ವಿಶೇಷ ಫಲಗಳು ಉಕ್ತವಾಗಿವೆ.

ಜ್ಯೋತಿಷ ಫಲಶಾಸ್ತ್ರದಲ್ಲಿ ಚಂದ್ರನ ಪಾತ್ರ ಅತಿಮುಖ್ಯವಾದದ್ದು. ಚಾಂದ್ರಬಲಂ ಹಿ ನಿಖಿಲ ಗ್ರಹವೀರ್ಯಬೀಜಂ ಎಂದು ಮಾಧವಾಚಾರ್ಯರು ತಿಳಿಸಿರುತ್ತಾರೆ. ಚಂದ್ರ-ತಾರಾಬಲವಿಲ್ಲದೆ ಜನ ಯಾವ ಕೆಲಸವನ್ನೂ ಮಾಡುವುದಿಲ್ಲ. ಚಂದ್ರನಿರುವ ನಕ್ಷತ್ರವೇ ದೈನಂದಿನ ನಕ್ಷತ್ರ. ಜನ್ಮಕಾಲದಲ್ಲಿ ಚಂದ್ರನಿರುವ ನಕ್ಷತ್ರ ಜನ್ಮನಕ್ಷತ್ರ. ಜನ್ಮನಕ್ಷತ್ರದಿಂದ ಇಷ್ಟದಿನದ ನಕ್ಷತ್ರದವರೆಗೆ ಲೆಕ್ಕಮಾಡಿ ಬಂದ ಸಂಖ್ಯೆಯಿಂದ ತಾರಾಬಲವನ್ನು ನೋಡುವುದು ಇಂದಿಗೂ ರೂಢಿಯಲ್ಲಿದೆ. ಜನ್ಮನಕ್ಷತ್ರ ಯಾವ ರಾಶಿಗೆ ಸೇರುತ್ತದೋ ಅದೇ ಜನ್ಮರಾಶಿ, ದೈನಂದಿನ ನಕ್ಷತ್ರ ಯಾವ ರಾಶಿಗೆ ಸೇರುತ್ತದೋ ಅದು ಚಂದ್ರನಿರುವ ರಾಶಿ. ಜನ್ಮರಾಶಿಯಿಂದ ಚಂದ್ರನಿರುವ ರಾಶಿಯವರೆಗೆ ಲೆಕ್ಕಮಾಡಿ ಚಂದ್ರಬಲವನ್ನು ಗಣನೆ ಮಾಡುತ್ತಾರೆ. ಜನ್ಮರಾಶಿಯಿಂದ 3,6,7,10,11ನೆಯ ರಾಶಿಗಳಲ್ಲಿ ಚಂದ್ರನಿದ್ದರೆ ಚಂದ್ರ ಬಲವಿರುತ್ತದೆ. ಇದು ಶುಭಪ್ರದ. ಕೃಷ್ಣಪಕ್ಷದಲ್ಲಿ ಚಂದ್ರಬಲ ಮುಖ್ಯ. ನಿಸರ್ಗಬಲದಲ್ಲಿ ಸೂರ್ಯನನ್ನು ಬಿಟ್ಟರೆ ಚಂದ್ರನೇ ಅತಿಬಲಿಷ್ಠ ಗ್ರಹ.

ಚಂದ್ರನಿಗೆ ಸೂರ್ಯ, ಬುಧರು ಮಿತ್ರರು. ಉಳಿದವರು ಮಧ್ಯಸ್ಥರು. ಶತ್ರುಗಳಿಲ್ಲ. ಚಂದ್ರಬಿಂಬದಲ್ಲಿ ಆರ್ಧಕ್ಕಿಂತ ಅಧಿಕ ಶುಕ್ಲವರ್ಣವಿದ್ದಾಗ ಚಂದ್ರ ಶುಭಗ್ರಹವೆಂದೂ ಶೌಕ್ಲ್ಯ ಅರ್ಧಕ್ಕಿಂತ ಕಡಿಮೆಯಾಗಿದ್ದಾಗ ಪಾಪಗ್ರಹವೆಂದೂ ಪರಿಗಣಿತನಾಗಿದ್ದಾನೆ. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ಣಪಕ್ಷದ ಅಷ್ಟಮಿವರೆಗಿನ ಚಂದ್ರ ಶುಭಗ್ರಹ, ಉಳಿದ ಕಾಲದ ಚಂದ್ರ ಪಾಪಗ್ರಹ, ಮೇಷಾದಿ ಹನ್ನೆರಡು ರಾಶಿಗಳಲ್ಲಿ ಕರ್ಕಾಟಕ ಚಂದ್ರನ ರಾಶಿ. ವೃಷಭ ಉಚ್ಚರಾಶಿ. ಅದರಲ್ಲಿ ಮೂರನೆಯ ಅಂಶ ಪರಮೋಚ್ಚ ಭಾಗ. ಆತನಿಗೆ ಮೂಲ ತ್ರಿಕೋಣ ವೃಷಭರಾಶಿಯೇ ಆಗಿದೆ. ವಾಯವ್ಯದಿಕ್ಕೆಗೆ ಚಂದ್ರ ಅಧಿಪತಿ. ಮನಸ್ಸಿಗೆ ಕಾರಕ.

ಐದನೆಯ ತಿಂಗಳಿನಲ್ಲಿ ಗರ್ಭಕ್ಕೆ ಚಂದ್ರ ಅಧಿಪತಿ. ಗರ್ಭಸ್ಥಶಿಶುವಿಗೆ ಈ ಕಾಲದಲ್ಲಿ ಧರ್ಮ ಹುಟ್ಟುತ್ತದೆ. ಮತ್ತೆ ಗರ್ಭದ ಒಂಬತ್ತನೆಯ ತಿಂಗಳಿಗೂ ಚಂದ್ರನೇ ಅಧಿಪತಿ. ಗರ್ಭಿಣಿಯ ಪ್ರಸವಕಾಲವನ್ನು ಪ್ರಶ್ನಕಾಲದಲ್ಲಿ  ಚಂದ್ರನಿರುವ ದ್ವಾದಶಾಂಶದಿಂದ ತಿಳಿಯಬಹುದು. ಚಂದ್ರ ಮಾತೃಕಾರಕ. ಮಾತೃವಿಗೆ ಸಂಬಂಧಪಟ್ಟ ವಿಚಾರವನ್ನು ಜಾತಕದಲ್ಲಿರುವ ಚಂದ್ರನ ಸ್ಥಿತಿಯಿಂದ ತಿಳಿಯಬಹುದು. ಜನನಕಾಲದಲ್ಲಿ ಚಂದ್ರ ಲಗ್ನದಿಂದ ಷಷ್ಠಿ-ಅಷ್ಟಮೀ-ವ್ಯವಸ್ಥಾನಗಳಲ್ಲಿದ್ದರೆ ಮಗುವಿಗೂ ತಾಯಿಗೂ ತೊಂದರೆ ಉಂಟಾಗುತ್ತದೆ.

ಜನನಕಾಲದಲ್ಲಿ ಚಂದ್ರನಿರುವ ಸ್ಥಾನದಿಂದ ಫಲಗಳು ಉಕ್ತವಾಗಿವೆ. ಲಗ್ನ ಮೇಷ-ವೃಷಭ-ಕರ್ಕಾಟಕ ಆಗಿ ಅಲ್ಲಿ ಚಂದ್ರನಿದ್ದರೆ ಶಿಶು ಸುಂದರವಾಗಿರುವುದಲ್ಲದೆ ಮುಂದೆ ಧನಧಾನ್ಯ ಸಮೃದ್ಧಿಯುಳ್ಳುದ್ದಾಗಿರುತ್ತದೆ. ಲಗ್ನದಿಂದ ಎರಡನೆಯ ಸ್ಥಾನದಲ್ಲಿ ಚಂದ್ರನಿದ್ದರೆ ಸೌಖ್ಯ, ಸ್ತ್ರೀವಿಲಾಸ, ದೈವಭಕ್ತಿ, ಪ್ರತಾಪ. ಮೂರನೆಯ ಸ್ಥಾನದಲ್ಲಿದ್ದರೆ ಧನಲಾಭ, ವಿಕ್ರಮ. ನಾಲ್ಕನೆಯ ರಾಶಿಯಲ್ಲಿ ಬಂಧುಸ್ತ್ರೀಪುತ್ರಸಂತೋಷ, ಗುರುದೈವಭಕ್ತಿ, ನಮ್ರಸ್ವಭಾವ. ಐದನೆಯ ಸ್ಥಾನದಲ್ಲಿ ಸಂತಾನಸೌಖ್ಯ, ನಿರ್ಮಲಬುದ್ಧಿ, ಆರನೆಯ ಸ್ಥಾನದಲ್ಲಿ ಬಹುಶತ್ರುವಿದ್ದರೂ ಪ್ರತಾಪಶಾಲಿ, ಮಾತೃಸೇವಾರಹಿತ, ರೋಗಿ, ನಿತ್ಯಶತ್ರು, ದುರ್ಬುದ್ಧಿ. ಏಳನೆಯ ಸ್ಥಾನದಲ್ಲಿ ಸ್ತುತಿಯೋಗ್ಯ, ಯೌವನ, ಚತುರಬುದ್ಧಿ, ಹತ್ತನೆಯ ಸ್ಥಾನದಲ್ಲಿ ಬಹುಪ್ರಿಯ, ಬಂಧುಸೌಖ್ಯ, ಪುಣ್ಯಭಾಗಿ, ಹನ್ನೊಂದನೆಯ ಸ್ಥಾನದಲ್ಲಿ ಸರ್ವಸ್ತುತ್ಯ, ಪ್ರಸನ್ನತೆ. ಹನ್ನೆರಡನೆಯ ಸ್ಥಾನದಲ್ಲಿ ವಿವಾಹಾದಿ ಮಂಗಳಕಾರ್ಯಗಳಲ್ಲಿ ಅಧಿಕ ಧನವ್ಯಯ, ರಕ್ತಸಂಬಂಧವಾದ ರೋಗ, ಬಹುಶತ್ರು.

ಈ ಫಲಗಳು ಜ್ಯೋತಿಷ ಫಲ ಗ್ರಂಥದಲ್ಲಿ ಉಕ್ತವಾಗಿವೆ.

ಮನುಷ್ಯನ ನೂರಿಪ್ಪತ್ತು ವರ್ಷಗಳ ಅವಧಿಯನ್ನು ಒಂಬತ್ತು ಗ್ರಹಗಳಿಗೂ ವಿಭಾಗ ಮಾಡಿ ಅವರವರ ದೇಶಕಾಲವನ್ನು ಗೊತ್ತುಮಾಡಿದ್ದಾರೆ. ಈ ವಿಭಾಗದಂತೆ ಚಂದ್ರನ ದಶಾಕಾಲ ಹತ್ತು ವರ್ಷಗಳು. ಸೂರ್ಯನ ದಶೆ ಕಳೆದ ಮೇಲೆ ಚಂದ್ರನ ದಶೆ ಪ್ರಾರಂಭವಾಗುತ್ತದೆ. ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳಲ್ಲಿ ಹುಟ್ಟಿದವರಿಗೆ ಚಂದ್ರದಶೆ ಪ್ರಾರಂಭದಲ್ಲೇ ಬರುತ್ತದೆ. 

ಚಂದ್ರ ದುಷ್ಟಸ್ಥಾನದಲ್ಲಿದ್ದು ಅಶುಭಫಲಪ್ರದನೆಂದು ತಿಳಿದುಬಂದಾಗ ಚಂದ್ರ ಶಾಂತಿಗಾಗಿ ತಂಡುಲದಾನ, ಮುಕ್ತಾಫಲದಾನ, ಘೃತಯುಕ್ತಪಾಯಸದಾನ, ಶುಭವಸ್ತ್ರದಾನ, ಶ್ವೇತಗೋದಾನ, ರೌಪ್ಯದಾನ, ಚಂದ್ರಮಂತ್ರಜಪ-ಇವೇ ಮೊದಲಾದ ಶಾಂತಿಗಳನ್ನು ನಡೆಸುವುದರಿಂದ ಕೆಟ್ಟಫಲಗಳು ಹೋಗುತ್ತವೆಯೆಂದು ಗ್ರಂಥಗಳಲ್ಲಿ ಉಕ್ತವಾಗಿದೆ. ಅದರಂತೆ ಇಂದಿಗೂ ಜನ ಶಾಂತಿಯನ್ನು ಮಾಡುತ್ತಾರೆ. 

ಕವಿಸಮಯದಲ್ಲೂ ಚಂದ್ರ ಪ್ರಮುಖ ಪಾತ್ರ ವಹಿಸಿದ್ದಾನೆ. ಸೌಂದರ್ಯವರ್ಣನೆಯಲ್ಲಿ ಮುಖವನ್ನು ಚಂದ್ರನಿಗೆ ಹೋಲಿಸುತ್ತಾರೆ. ವಿರಹಿಗಳಿಗೆ ಚಂದ್ರೋದಯವಾದಾಗ ತಾಪ ಅಧಿಕವಾಗುವುದನ್ನೂ ಕಾಮಿಗಳಿಗೆ ಕಾಮೋದ್ರೇಕವಾಗುವುದನ್ನೂ ಕವಿಗಳು ಬಗೆಬಗೆಯಾಗಿ ವರ್ಣಿಸಿದ್ದಾರೆ.	(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ